ನಮ್ಮ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಅಧ್ಯಯನ ಕೇಂದ್ರಕ್ಕೆ ಸ್ವಾಗತ

ಪ್ರಾಚಾರ್ಯರ ಮಾತು ...


‘ಸಂಸ್ಕೃತಿಃ ಸಂಸ್ಕೃತಾಶ್ರಿತಾ’ ಎನ್ನುವ ಮಾತಿನಂತೆ ಸನಾತನವಾದ ನಮ್ಮ ಸಂಸ್ಕೃತಿಯು ಸಂಸ್ಕೃತವನ್ನಾಶ್ರಯಿಸಿದೆ. ಸಂಸ್ಕೃತವಿಲ್ಲದಿದ್ದರೆ ಸಂಸ್ಕೃತಿಯನ್ನು ಅರಿಯಲು ಸಾಧ್ಯವಿಲ್ಲ. ಅಂತಹ ಸಂಸ್ಕೃತವನ್ನು ಮತ್ತು ಸಂಸ್ಕೃತಿಯನ್ನು ಸಾರುವ ವೇದಾಂತ, ನ್ಯಾಯ ಮೊದಲಾದ ಶಾಸ್ತ್ರಗಳ ಬೋಧನೆಯ ದೃಷ್ಟಿಯಿಂದ ಕ್ರಿ.ಶ. 1904ರಲ್ಲಿ ಜನ್ಮ ತಾಳಿದುದು ಉಡುಪಿಯ ಈ ಎಸ್.ಎಮ್.ಎಸ್.ಪಿ. ಸಂಸ್ಕೃತ ಮಹಾವಿದ್ಯಾಲಯ. ಇದು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧವಾದ ಸಂಸ್ಕೃತ ಕಾಲೇಜುಗಳಲ್ಲಿ ಒಂದಾಗಿದೆ. ಇದು ಇಲ್ಲಿನ ಪರಮಪೂಜ್ಯ ಅಷ್ಟಮಠಾಧೀಶರಿಂದ ಸ್ಥಾಪಿಸಲ್ಪಟ್ಟಿದ್ದು ಪರ್ಯಾಯ ಪೀಠಾಧೀಶರು ಅಧ್ಯಕ್ಷರಾಗಿರುವ ಎಸ್.ಎಮ್.ಎಸ್.ಪಿ ಸಭಾ ಎಂಬ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿದೆ.

ಶತಮಾನೋತ್ಸವವನ್ನು ಕಂಡ ಕೆಲವೇ ಕೆಲವು ಕಾಲೇಜುಗಳಲ್ಲಿ ಇದು ಒಂದಾಗಿದೆ. ಇದಕ್ಕೆ ಈಗ ಕ್ರಿ.ಶ. 2021 ರಲ್ಲಿ 117 ನೆಯ ವರ್ಷ ನಡೆಯುತ್ತಿದೆ. ಉಡುಪಿ, ದಕ್ಷಿಣಕನ್ನಡ ಮೊದಲಾದ ಕರಾವಳಿ ಜಿಲ್ಲೆಗಳ ಪ್ರದೇಶದಲ್ಲಿ ಇಂತಹ ಕಾಲೇಜು ಏಕಮಾತ್ರವಾಗಿದ್ದು ಕೇವಲ ಸಂಸ್ಕೃತ ಮತ್ತು ಶಾಸ್ತ್ರಗಳ ಬೋಧನೆಗೆ ಸೀಮಿತವಾಗಿರುತ್ತದೆ. ಈ ಕಾಲೇಜಿನಲ್ಲಿ ಯಾವುದೇ ವಿಧವಾದ ಶಿಕ್ಷಣ ಶುಲ್ಕವಿರುವುದಿಲ್ಲ. ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ ಮತ್ತು ಇಲ್ಲಿನ ಶ್ರೀಕೃಷ್ಣಮಠದ ಸಹಕಾರದಿಂದ ಉಚಿತವಾಗಿ ಭೋಜನದ ವ್ಯವಸ್ಥೆಯಿದೆ. ಉಡುಪಿಯು ಆಚಾರ್ಯ ಮಧ್ವರ ದ್ವೈತ ವೇದಾಂತದ ಉಗಮ ಸ್ಥಾನವಾಗಿದ್ದು, ಅದನ್ನು ಬೋಧಿಸುವ ಕೆಲವೇ ಕೆಲವು ಕಾಲೇಜುಗಳಲ್ಲಿ ಈ ಕಾಲೇಜು ಕೂಡಾ ಒಂದಾಗಿರುವುದು ವಿಶೇಷ.

ಇದರಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಮೊದಲಾದ ಸಂಸ್ಥೆಗಳಿಂದ ಆಯೋಜಿಸಲ್ಪಡುವ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಜಯವನ್ನು ಗಳಿಸುತ್ತಿದ್ದಾರೆ. ಮಾತ್ರವಲ್ಲದೆ ಇಲ್ಲಿ ಅಧ್ಯಯನ ಮಾಡಿದ ಹಲವಾರು ಮಂದಿ ವಿದ್ಯಾರ್ಥಿಗಳು ಧಾರ್ಮಿಕ, ಸಾಮಾಜಿಕ, ಕಲೆ ಮೊದಲಾದ ನಾನಾ ಕ್ಷೇತ್ರಗಳಲ್ಲಿ ವಿಖ್ಯಾತರಾಗಿರುವುದು ಮಾತ್ರವಲ್ಲದೆ ಇನ್ನೆಷ್ಟೊ ಮಂದಿ ರಾಜ್ಯ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ಕಾಲೇಜು, ವಿಶ್ವವಿದ್ಯಾಲಯ ಮುಂತಾದ ಹಲವಾರು ಸಂಸ್ಕೃತ ಶೈಕ್ಷಣಿಕ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆಯನ್ನು ಹೊಂದಿದ ಈ ಕಾಲೇಜಿನಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಮಾತ್ರವಲ್ಲದೆ ಕರ್ನಾಟಕದ ಇತರ ಪ್ರದೇಶಗಳಿಂದಲೂ ಆಗಮಿಸುತ್ತಿದ್ದಾರೆ. ಈಗೀಗ ಕೇರಳ, ಒಡಿಶಾ, ಆಂಧ್ರಪ್ರದೇಶ ಮೊದಲಾದ ಬೇರೆ ರಾಜ್ಯಗಳಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಿರುವುದು ವಿಶೇಷ ಸಂಗತಿ.

ಈ ಕಾಲೇಜಿನಲ್ಲಿ ಸಾಹಿತ್ಯದ ಜೊತೆಗೆ ಅಲಂಕಾರ, ನ್ಯಾಯ, ಜ್ಯೌತಿಷ ಮತ್ತು ದ್ವೈತವೇದಾಂತ ಎಂಬ ನಾಲ್ಕು ಶಾಸ್ತ್ರಗಳು ಬೋಧಿಸಲ್ಪಡುತ್ತಿವೆ. ಅವುಗಳಲ್ಲಿ ಉತ್ತೀರ್ಣರಾದವರಿಗೆ ಕ್ರಮವಾಗಿ ಬೆಂಗಳೂರಿನ ಸಂಸ್ಕೃತ ನಿರ್ದೇಶನಾಲಯ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪ್ರಮಾಣಪತ್ರವು ನೀಡಲ್ಪಡುತ್ತದೆ. ಪ್ರಕೃತ, ಕ್ರಿ.ಶ. 1950 ರಲ್ಲಿ ನಿರ್ಮಿತವಾದ ಈ ಕಾಲೇಜಿನ ಕಟ್ಟಡವು ಸುಮಾರು 69 ವರ್ಷಗಳ ಅನಂತರ ಅರ್ಥಾತ್ ಕ್ರಿ.ಶ. 2019 ರಲ್ಲಿ ಸುಮಾರು 3.50 ಕೋಟಿ ರೂ.ಗಳ ವೆಚ್ಚದಲ್ಲಿ ಸಂಪೂರ್ಣವಾಗಿ ನವೀಕರಣವನ್ನು ಹೊಂದಿರುತ್ತದೆ. ಅದರ ಜೊತೆಗೆ ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್ ಕೂಡಾ ನಿರ್ಮಿಸಲ್ಪಟ್ಟಿವುದರಿಂದ ಸಂಸ್ಕೃತ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಕೂಡಾ ಪಡೆಯಬಹುದು.

ನಮ್ಮ ಕಾಲೇಜಿನಲ್ಲಿ ಬಹಳಷ್ಟು ಗ್ರಂಥಗಳನ್ನು ಹೊಂದಿರುವ ಗ್ರಂಥಾಲಯವೂ ಇರುವುದರಿಂದ ಅಧ್ಯಯನಾಸಕ್ತ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲತೆಯೂ ಕೂಡಾ ಉಂಟಾಗುತ್ತದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ನಡೆಯುವ ರುಚಿರಭಾರತೀ ಸಭೆಯಲ್ಲಿ ವಿದ್ಯಾರ್ಥಿಗಳು ಭಾಷಣ ಮೊದಲಾದುವುಗಳಲ್ಲಿ ತಮ್ಮ ಪ್ರತಿಭೆಯನ್ನು ಕೂಡಾ ತೋರಿಸಬಹುದಾಗಿದೆ.

ಈ ಕಾಲೇಜು ಕರ್ನಾಟಕದಲ್ಲಿ ತುಂಬಾ ಹೆಸರುವಾಸಿಯಾಗಿದ್ದು, ಉಡುಪಿ, ದಕ್ಷಿಣ ಕನ್ನಡ ಮೊದಲಾದ ಕರಾವಳಿ ಜಿಲ್ಲೆಗಳಲ್ಲಿ ನಿರಂತರವಾಗಿ ಸಂಸ್ಕೃತವನ್ನು ಸಂರಕ್ಷಿಸಿಕೊಂಡು ಬಂದಿದೆ. ಈ ಪ್ರಾಂತದಲ್ಲಿ ಸಂಸ್ಕೃತ ಮತ್ತು ಸಂಸ್ಕೃತಿ ಉಳಿದುಕೊಂಡಿದೆಯೆಂದರೆ ಅದಕ್ಕೆ ಕಾರಣ ಈ ಕಾಲೇಜು ಕೂಡಾ ಒಂದು ಎನ್ನುವ ವಿಷಯದಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಆದುದರಿಂದ ಇಂತಹ ಸಂಸ್ಥೆಯನ್ನು ಉಳಿಸಿ ಬೆಳೆಸಬೇಕಾದುದು ಭಾರತೀಯ ಸಂಸ್ಕೃತಿಯನ್ನು ಬೆಳೆಯಿಸಬೇಕಾದ ಸಮಾಜ ಮತ್ತು ಸಂಘ ಸಂಸ್ಥೆಗಳ ಕರ್ತವ್ಯ.

ಹೆಚ್ಚಿನ ಎಲ್ಲಾ ಅಗತ್ಯತೆಗಳನ್ನು ಹೊಂದಿರುವ ನಮ್ಮ ಕಾಲೇಜಿಗೆ ವಿದ್ಯಾರ್ಥಿಗಳೇ! ಬನ್ನಿ. ಸಂಸ್ಕೃತ ಮತ್ತು ಶಾಸ್ತ್ರವನ್ನು ಅಧ್ಯಯನ ಮಾಡಿ ನಮ್ಮ ಸನಾತನ ಸಂಸ್ಕೃತಿಯನ್ನು ರಕ್ಷಿಸಿರಿ. ತಮಗಿದೋ ಪ್ರೀತಿಪೂರ್ವಕ ಸ್ವಾಗತ.