ನಮ್ಮ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಅಧ್ಯಯನ ಕೇಂದ್ರಕ್ಕೆ ಸ್ವಾಗತ

ಕಾಲೇಜಿನ ಇತಿಹಾಸ


ಶಾಲೀವಾಹನಶಕೇ ಸುಖೊದಯಮಿತೆ ಕ್ರೋಧ್ಯಬ್ದಕೆ ಶ್ರಾವಣೇ
ಪಕ್ಷೇ ಶ್ಯಾಮಲಕೇ ದ್ವಿತೀಯದಿವಸೆ ಶಾಲೇಯಮಾವಿಷ್ಖೃತಾ |
ಶ್ರೀಮನ್ಮಧ್ವಮುನೀಂದ್ರವಂಶತಿಲಕೈರಷ್ಟಾಭಿರಿಷ್ಟಪ್ರದೈ-
ರ್ದಿಕ್ಪಾಲೈರಿವ ಭವ್ಯಗೇಯಚರಿತೈಃ ಸಂವರ್ಧಿತಾ ರಾಜತಾಮ್ ||

ಶ್ರೀಶ್ರೀಮನ್ಮಧ್ವಸಿದ್ಧಾಂತಪ್ರಬೋಧಿನ್ಯಮೃತಪ್ರದಾ |
ಕಾಮಧೇನುರ್ಬುಧಾರಾಧ್ಯಾ ರಾಜತಾಂ ರಾಜತಾಸನೇ ||

ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆಯನ್ನು ಮಾಡಿ, ದುಷ್ಟಕ್ಷತ್ರಿಯರನ್ನು ಸಂಹರಿಸಿ, ಪ್ರಾಪ್ತವಾದ ಸಕಲ ಭೂಮಿಯನ್ನು ವಿಪ್ರರಿಗೆ ದಾನವಾಗಿಕೊಟ್ಟ ಬಳಿಕ, ದತ್ತವಾದ ಆ ಭೂಮಿಯಲ್ಲಿ ತಾನು ಪುನಃ ವಾಸಮಾಡುವುದು ದತ್ತಾಪಹಾರವೆನ್ನುವ ದೋಷವಾಗಬಹುದೆಂದು ಹೆದರಿದ ಭಾರ್ಗವರಾಮನು ಸಮೀಪದಲ್ಲಿರುವ ಮಹೇಂದ್ರಪರ್ವತನ್ನೇರಿ ಪಶ್ಚಿಮಾಭಿಮುಖವಾಗಿ ನಿಂತು ಸಮುದ್ರದ ಮೇಲೆ ತನ್ನ ಕೊಡಲಿಯನ್ನು ಎಸೆಯುತ್ತಾನೆ. ಅವನ ಅಪೇಕ್ಷೆಯಂತೆ ಸಮುದ್ರವು ಸ್ವಲ್ಪ ಪಶ್ಚಿಮಕ್ಕೆ ಸರಿಯಿತು. ಇದರಿಂದಾಗಿ ನಾಸಿಕದ ತ್ರ್ಯಂಬಕೇಶ್ವರದಿಂದ ಆರಂಭಿಸಿ ದಕ್ಷಿಣದ ಕನ್ಯಾಕುಮಾರಿಯವರೆಗೆ ಭಾರತಭೂದೇವಿಯ ಸೆರಗಿನ ಅಂಚೋ ಎಂಬಂತೆ ಭಾಸವಾಗುವ ಈ ರಮಣೀಯವಾದ ಕರಾವಳಿ ಪ್ರದೇಶವು ಆವಿರ್ಭವಿಸಿತು. ಇದುವೇ ಪರಶುರಾಮಕ್ಷೇತ್ರ.

ರಾಮಕ್ಷೇತ್ರದಲ್ಲಿರುವಂತೆ ಇಲ್ಲಿಯೂ ಅನೇಕ ನದಿಗಳಿವೆ, ಪರ್ವತಗಳಿವೆ, ನಾನಾವಿಧವಾದ ಸಸ್ಯಸಂಕುಲವಿದೆ. ಹಲವಾರು ಪುಣ್ಯಕ್ಷೇತ್ರಗಳಿವೆ. ಅವುಗಳಲ್ಲೊಂದು ‘ರಜತಪೀಠ’ ಎಂಬ ಕ್ಷೇತ್ರ. ‘ಶಿವಳ್ಳಿ’ ಎನ್ನುವುದು ಇದಕ್ಕೆ ಆಡುಭಾಷೆಯಲ್ಲಿನ ಹೆಸರು. ಈ ಕ್ಷೇತ್ರದ ದೇವತೆಯಾದ ಅನಂತೇಶ್ವರನ ಪೀಠವು ರಜತಮಯವಾದುದು. ಆದ್ದರಿಂದ ಇದಕ್ಕೆ ರಜತಪೀಠ, ರೌಪ್ಯಪೀಠ ಎಂಬ ಹೆಸರುಗಳೆನ್ನುವುದು ಇಲ್ಲಿನ ಐತಿಹ್ಯ. ಚಂದ್ರನ ತಪಸ್ಸಿಗೆ ಒಲಿದ ಶಿವನು ಇಲ್ಲಿ ಶ್ರೀ ಚಂದ್ರಮೌಳೀಶ್ವರನಾಗಿ ನಿಂತಿರುವುದು ಈ ಕ್ಷೇತ್ರದ ಮತ್ತೊಂದು ಗರಿಮೆ. ಇದರಿಂದಾಗಿ ಈ ಪ್ರದೇಶಕ್ಕೆ ಉಡುಪಿ ಎಂಬ ಇನ್ನೊಂದು ಹೆಸರು ಕೂಡಾ ಸೇರ್ಪಡೆಗೊಂಡಿತು. ಮುಂದೆ ಆಚಾರ್ಯಮಧ್ವರಿಗೊಲಿದ ಶ್ರೀಕೃಷ್ಣನು ಇಲ್ಲಿ ನೆಲೆ ನಿಂತು ಈ ನೆಲದ ಮಹಿಮೆಯನ್ನು ಇಮ್ಮಡಿಗೊಳಿಸಿದ್ದು ಸಮಸ್ತ ಆಸ್ತಿಕರ ಭಾಗ್ಯವೇ ಸರಿ. ಇಂತಹ ಪುಣ್ಯ ಕ್ಷೇತ್ರವು ಇಂದು ಉಡುಪಿಯೆಂದು ಪ್ರಸಿದ್ಧವಾಗಿದೆ. ಪುರಾಣಪ್ರಸಿದ್ಧ ಕ್ಷೇತ್ರವೆನಿಸಿದ ಈ ಸ್ಥಳವು ಮೋಕ್ಷದಾಯಕವಾದ ಸಪ್ತ ಕ್ಷೇತ್ರಗಳಲ್ಲೊಂದು. ಅದರ ಕುರಿತಾಗಿ ಈ ಮಾತು ಪ್ರಸಿದ್ಧವಾಗಿದೆ -

ರೌಪ್ಯಪೀಠಂ ಕುಮಾರಾದ್ರಿಃ ಕುಂಭಾಸಿಶ್ಚ ಧ್ವಜೇಶ್ವರಃ |
ಕ್ರೋಡಗೋಕರ್ಣಮೂಕಾಂಬಾಃ ಸಪ್ತೈತೇ ಮೋಕ್ಷದಾಯಕಾಃ ||

ಇಂತಹ ಪ್ರಸಿದ್ಧವಾದ ಕ್ಷೇತ್ರದಲ್ಲಿ ಕ್ರಿಸ್ತಶಕ ಹದಿಮೂರನೆಯ ಶತಮಾನದಲ್ಲಿ ದ್ವೈತ ಮತದ ಪ್ರವರ್ತಕರಾದ ಶ್ರೀಮನ್ಮಧ್ವಾಚಾರ್ಯರು ಆವಿರ್ಭವಿಸಿದರು. ಇವರ ಗುರುಗಳು ಅಚ್ಯುತಪ್ರಜ್ಞಾಚಾರ್ಯರು. ವಾಯುವಿನ ಅವತಾರವೆನಿಸಿರುವ ಇವರು ಉಡುಪಿಯ ಸಮೀಪದ ಪಾಜಕದಲ್ಲಿ ಜನ್ಮವೆತ್ತಿ ‘ವೇದಾದಿ ಸಕಲ ಶಾಸ್ತ್ರವಾಕ್ಯಗಳಿಗೆ ಶ್ರೀಹರಿಯಲ್ಲಿಯೇ ತಾತ್ಪರ್ಯ, ಈ ಜಗತ್ತು ಸತ್ಯವಾದುದು, ಉಚ್ಚ ನೀಚರಾಗಿರುವ ಎಲ್ಲಾ ಜೀವಿಗಳು ಪರಸ್ಪರ ಭಿನ್ನರು ಮತ್ತು ಹರಿಯ ಸೇವಕರು. ಸ್ವಸ್ವರೂಪಾನಂದಾನುಭೂತಿಯೇ ಮೋಕ್ಷ, ಅದನ್ನು ಹೊಂದಲು ನಿರ್ಮಲವಾದ ಹರಿಭಕ್ತಿಯೊಂದೇ ಪರಮ ಸಾಧನ, ಪ್ರತ್ಯಕ್ಷ, ಅನುಮಾನ ಮತ್ತು ಆಗಮವೆಂಬುದಾಗಿ ಮೂರೇ ಮೂರು ಪ್ರಮಾಣಗಳು. ಜೀವ-ಬ್ರಹ್ಮರಲ್ಲಿ ಭೇದವು ಶಾಶ್ವತವಾದುದು’ ಎಂದು ಪ್ರತಿಪಾದಿಸಿ ದ್ವೈತಸಿದ್ಧಾಂತವನ್ನು ಪ್ರತಿಷ್ಠಾಪಿಸಿದರು. ಅವರ ತತ್ತ್ವವು ಈ ಕೆಳಗಿನ ಶ್ಲೋಕದಿಂದ ಸ್ಫುಟವಾಗುತ್ತದೆ -

ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯಂ ಜಗತ್ತತ್ತ್ವತೋ
ಭಿನ್ನಾ ಜೀವಗಣಾ ಹರೇರನುಚರಾ ನೀಚೋಚ್ಚಭಾವಂ ಗತಾಃ |
ಮುಕ್ತಿರ್ನೈಜಸುಖಾನುಭೂತಿರಮಲಾ ಭಕ್ತಿಶ್ಚ ತತ್ಸಾಧನಂ
ಹ್ಯಕ್ಷಾದಿತ್ರಿತಯಂ ಪ್ರಮಾಣಮಖಿಲಾಮ್ನಾಯೈಕವೇದ್ಯೋ ಹರಿಃ ||

ತನ್ನ ಆರಾಧ್ಯದೇವನಾದ ಶ್ರೀಕೃಷ್ಣನ ಆರಾಧನೆಗಾಗಿ ಮಠವೊಂದನ್ನು ನಿರ್ಮಿಸಿ ಅವನ ಆರಾಧನೆ ಮತ್ತು ದ್ವೈತಸಿದ್ಧಾಂತದ ಪ್ರಸಾರಕ್ಕಾಗಿ ಎಂಟು ಮಂದಿ ಶಿಷ್ಯರನ್ನು ನಿಯೋಜಿಸಿದರು. ಇವರೇ ಅಷ್ಟಮಠದ ಮೂಲ ಯತಿಗಳು. ಮುಂದೆ ಅವರ ಪರಂಪರೆಯಲ್ಲಿಯೇ ಆವಿರ್ಭವಿಸಿದ ಹಲವಾರು ಯತಿವರ್ಯರು ಈ ಕ್ಷೇತ್ರವನ್ನು ತಮ್ಮ ತಪೋವಿಶೇಷದಿಂದ ಇನ್ನೂ ಎತ್ತರಕ್ಕೇರಿಸಿದರು. ತಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುಂದುವರಿದಿರುವ ಅಷ್ಟಮಠದ ಯತಿಗಳು ಸಂಸ್ಕೃತ ಮತ್ತು ಶಾಸ್ತ್ರಗಳ ರಕ್ಷಣೆಗಾಗಿ ಅನವರತವಾಗಿ ಶ್ರಮಿಸಿರುತ್ತಾರೆ. ಇಂತಹ ಭವ್ಯಪರಂಪರೆಯಲ್ಲಿ ಬಂದ ಯತಿವರ್ಯರು ಆಚಾರ್ಯ ಮಧ್ವರ ಕಾಲದಲ್ಲಿಯೇ ವೇದಾಂತಾದಿ ಶಾಸ್ತ್ರಗಳಿಗೆ ಪ್ರವಚನ ಕೇಂದ್ರವೆನಿಸಿದ್ದ ಶ್ರೀಮದನಂತೇಶ್ವರ ದೇವರ ಸನ್ನಿಧಾನದಲ್ಲಿ ಶಾಲಿವಾಹನ ಶಕೆಯ 1827 ನೇ (ಕ್ರಿಸ್ತಶಕ 1904) ಕ್ರೋಧಿ ನಾಮ ಸಂವತ್ಸರದ ಶ್ರಾವಣ ಕೃಷ್ಣ ಪ್ರತಿಪತ್ ತಿಥಿಯಂದು ಶ್ರೀರಾಘವೇಂದ್ರಸ್ವಾಮಿಗಳ ಪುಣ್ಯದಿನದ ಪರ್ವಕಾಲದಲ್ಲಿ ಅಧಿಕೃತವಾಗಿ ‘ಶ್ರೀಮನ್ಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತಪಾಠಶಾಲಾ’ಎಂಬ ಹೆಸರಿನ ಸಂಸ್ಥೆಯೊಂದನ್ನು ಹುಟ್ಟು ಹಾಕಿದರು.

ನಮ್ಮ ಈ ಮಹಾವಿದ್ಯಾಲಯದ ಸಂಸ್ಥಾಪಕರಾಗಿದ್ದ ಆಗಿನ ಅಷ್ಟಮಠಾಧೀಶರು -

೧.ಶ್ರೀಶ್ರೀ ಸುಧೀಂದ್ರತೀರ್ಥ ಶ್ರೀಪಾದರು ಶ್ರೀ ಪುತ್ತಿಕಾಮಠ.
೨.ಶ್ರೀಶ್ರೀ ವಿಬುಧಪ್ರಿಯತೀರ್ಥ ಶ್ರೀಪಾದರು ಶ್ರೀಅದಮಾರುಮಠ.
೩.ಶ್ರೀಶ್ರೀ ವಿದ್ಯಾಪೂರ್ಣತೀರ್ಥ ಶ್ರೀಪಾದರು ಶ್ರೀಕೃಷ್ಣಾಪುರಮಠ.
೪.ಶ್ರೀಶ್ರೀ ರಘುಪ್ರಿಯತೀರ್ಥ ಶ್ರೀಪಾದರು ಶ್ರೀಫಲಿಮಾರುಮಠ.
೫.ಶ್ರೀಶ್ರೀ ವಿಶ್ವಜ್ಞತೀರ್ಥ ಶ್ರೀಪಾದರು ಶ್ರೀಪೇಜಾವರಮಠ.
೬.ಶ್ರೀಶ್ರೀ ಲಕ್ಷ್ಮೀಸಮುದ್ರತೀರ್ಥ ಶ್ರೀಪಾದರು ಶ್ರೀಶೀರೂರುಮಠ.
೭.ಶ್ರೀಶ್ರೀ ವಿಶ್ವೇಂದ್ರತೀರ್ಥ ಶ್ರೀಪಾದರು ಶ್ರೀಸೋದಾಮಠ.
೮.ಶ್ರೀಶ್ರೀ ವಿದ್ಯಾಸಮುದ್ರತೀರ್ಥ ಶ್ರೀಪಾದರು ಶ್ರೀಕಾಣಿಯೂರುಮಠ.

ಅಲ್ಲಿಯ ತನಕ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ನಡೆಯುತ್ತಿದ್ದ ಈ ಪಾಠಶಾಲೆ 1919 ರಲ್ಲಿ ಮದರಾಸು ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದು ಮಹಾಪಾಠಶಾಲೆಯೆಂದು ಪರಿಗಣಿತವಾಯಿತು. ಆಗ ವಿಶ್ವವಿದ್ಯಾನಿಲಯದ ನಿಯಮದಂತೆ ಪ್ರಾಚಾರ್ಯರೊಬ್ಬರ ನಿಯುಕ್ತಿಯಾಗಬೇಕಾದುದರಿಂದ ಮಡಿಕೇರಿ ದಾಸಪ್ಪಯ್ಯನವರು ಪ್ರಥಮ ಪ್ರಾಚಾರ್ಯರಾಗಿ ಅಧಿಕಾರವನ್ನು ಸ್ವೀಕರಿಸಿದರು.

ವೇದ ಮತ್ತು ಶಾಸ್ತ್ರಗಳ ಅಧ್ಯಯನ ಮತ್ತು ಅಧ್ಯಾಪನ ಕೇಂದ್ರವಾಗಿದ್ದ ಈ ಮಹಾಪಾಠಶಾಲೆಯು ವಿದ್ಯಾರ್ಥಿಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಶ್ರೀಮದನಂತೇಶ್ವರ ದೇವಸ್ಥಾನದಿಂದ ಶ್ರೀಚಂದ್ರಮೌಳೀಶ್ವರ ದೇವಾಲಯಕ್ಕೆ ಬಳಿಕ ಅದಮಾರು ಮಠಕ್ಕೆ ಸಂಬಂಧಿಸಿದ ಕಡೆಕೊಪ್ಪಲ ಮಠಕ್ಕೆ ಸ್ಥಳಾಂತರವಾಯಿತು. ಬಳಿಕ ಊರ ಪರವೂರ ವಿದ್ಯಾರ್ಥಿಗಳನ್ನು ಆಕರ್ಷಿಸಿ ಬೆಳೆಯುತ್ತಾ ಹೋದ ಈ ಸಂಸ್ಥೆಗೆ ಸ್ವಂತ ಒಂದು ಭವನದ ಆವಶ್ಯಕತೆ ಉಂಟಾದಾಗ ಮದರಾಸಿನಲ್ಲಿ ಖ್ಯಾತಿಗಳಿಸಿದ ಉಡುಪಿ ಮೂಲದ ಡಾಕ್ಟರ್ ಯು. ರಾಮರಾಯರು ಉಡುಪಿಯ ಹೃದಯದಂತಿರುವ ಸುಮಾರು ಒಂದುವರೆ ಎಕರೆ ಖಾಲಿ ಜಾಗವನ್ನು ಕಾಲೇಜಿನ ಕಟ್ಟಡಕ್ಕಾಗಿ ದಾನಪತ್ರದ ಮೂಲಕ ಬಿಟ್ಟುಕೊಟ್ಟರು. ಇದರಿಂದಾಗಿ ಕ್ರಿ.ಶ 1952 ರಲ್ಲಿ ಕಾಲೇಜು ಈಗಿನ ಭವ್ಯ ಭವನವನ್ನು ಹೊಂದಿತು.

ಇದರ ನಿರ್ಮಾಣಕ್ಕೆ ಆಗಿನ ಎಲ್ಲಾ ಯತಿವರ್ಯರೂ ಕಾರಣೀಭೂತರಾಗಿದ್ದರೂ, ಜನಾನುರಾಗಿಗಳು ಮತ್ತು ಕಾಲೋಚಿತ ನಿರ್ಣಯಗಳನ್ನು ಕೈಗೊಳ್ಳುವವರೂ ಆಗಿದ್ದ ಶ್ರೀಅದಮಾರು ಮಠದ ಶ್ರೀಶ್ರೀವಿಬುಧಪ್ರಿಯತೀರ್ಥರು ಪ್ರಧಾನವಾದ ಕಾರಣ ಎನ್ನುವಲ್ಲಿ ಯಾರದ್ದೂ ಎರಡು ಮಾತಿಲ್ಲ. ಈ ಕಟ್ಟಡಕ್ಕೆ ನಿಧಿಸಂಗ್ರಹದಲ್ಲಿ ತೊಡಗಿರುವಾಗಲೇ ಅವರು ವೃಂದಾವನಸ್ಥರಾದುದರಿಂದ ಮುಂದಿನ ಕಾರ್ಯವನ್ನು ಶ್ರೀಫಲಿಮಾರು ಮಠಾಧೀಶರಾದ ಶ್ರೀಶ್ರೀರಘುಮಾನ್ಯತೀರ್ಥರು ಕೈಗೊಂಡರು. ಗಟ್ಟಿಮುಟ್ಟಾದ ಪಂಚಾಂಗವನ್ನು ನಿರ್ಮಿಸುವಂತೆ ರಚನಾ ಶಿಲ್ಪಿಗೆ ನಿರ್ದೇಶಿಸಿ ಮುಂದಿನ ಕಾರ್ಯಕ್ಕೋಸ್ಕರ ಅವರು ನಿಧಿ ಸಂಗ್ರಹದಲ್ಲಿ ತೊಡಗಿದ್ದಾಗ ವಿಧಿಯ ಸಂಕಲ್ಪದಂತೆ ವೃಂದಾವನಸ್ಥರಾದರು. ಹೀಗೆ ಕಟ್ಟಡದ ಕಾರ್ಯವು ಅರ್ಧಕ್ಕೆ ನಿಂತಾಗ ಆಗ ಅವರ ಶಿಷ್ಯರಾಗಿರುವ ಶ್ರೀಅದಮಾರು ಮಠದ ಶ್ರೀಶ್ರೀ ವಿಬುಧೇಶತೀರ್ಥರು ಕ್ರಿಸ್ತಶಕ 1951 ರಲ್ಲಿ ಭವನದ ನಿರ್ಮಾಣಕಾರ್ಯವನ್ನು ಪೂರ್ಣಗೊಳಿಸಿದರು.

ಇದನ್ನು ದಿನಾಂಕ 14.6.1951 ರಂದು ಆಗಿನ ಬೊಂಬಾಯಿ ಪ್ರಾಂತದ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಶ್ರೀ ಬಿ.ಜಿ.ಖೇರ್ ಇದರ ಉದ್ಘಾಟನೋತ್ಸವ ನೆರವೇರಿತು. ಆಗಿನ ಕಾಲದಲ್ಲಿ ಈ ಭವನದ ನಿರ್ಮಾಣಕ್ಕೆ ಆಗಿನ ಕಾಲದಲ್ಲಿ ಮೂರು ಲಕ್ಷ ರೂ.ಗಳಷ್ಟು ಹಣ ಖರ್ಚಾಗಿತ್ತು ಎನ್ನುವುದು ಉಲ್ಲೇಖನೀಯ ಸಂಗತಿ. ಇಂದಿಗೆ ಸುಮಾರು 70 ವರ್ಷಗಳಷ್ಟು ಹಳೆಯದಾದ ಈ ಭವನದಲ್ಲಿ ಸಮರ್ಥ ವಿದ್ವಾಂಸರ ಪಾಠಪ್ರವಚನಗಳೊಂದಿಗೆ ಶಾಸ್ತ್ರಾಧ್ಯಯನ ಪರಂಪರೆಯು ಮುಂದೆ ಸಾಗುತ್ತಿದೆ.

ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳಲ್ಲಿ ಹಲವರು ಮಠಾಧೀಶರಾಗಿ, ಲೇಖಕರಾಗಿ, ಶ್ರೇಷ್ಠವಿಮರ್ಶಕರಾಗಿ, ಉಪನ್ಯಾಸಕರಾಗಿ, ಜ್ಯೋತಿಷಿಗಳಾಗಿ, ಪುರೋಹಿತರಾಗಿ, ಧಾರ್ಮಿಕ ಮೊದಲಾದ ಕ್ಷೇತ್ರಗಳಲ್ಲಿ ನೇತಾರರಾಗಿ, ಅಧ್ಯಾಪಕರಾಗಿ ವಿಶೇಷತಃ ಸುಸಂಸ್ಕೃತ ಕೀರ್ತಿಶಾಲಿ ವ್ಯಕ್ತಿಗಳಾಗಿ ಸಮಾಜದಲ್ಲಿ ಮಾನ್ಯತೆಯನ್ನು ಹೊಂದಿ ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿರುವುದು ಹೆಮ್ಮೆಯ ಸಂಗತಿ. ಅವರಲ್ಲಿ ವಿರಕ್ತಿಮಾರ್ಗವನ್ನರಸಿ ಯತಿಗಳಾಗಿ ಜೀವನವನ್ನು ಸಾರ್ಥಗೊಳಿಸಿಕೊಂಡ ಮಹನೀಯರು ಈ ಕೆಳಗಿನವರು -

೧. ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರು ಶ್ರೀಕೃಷ್ಣಾಪುರ ಮಠ.
೨. ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರು ಶ್ರೀ ಫಲಿಮಾರು ಮತ್ತು ಶ್ರೀ ಭಂಡಾರಕೇರಿ ಮಠ.
೩. ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಶ್ರೀಫಲಿಮಾರು ಮಠ.
೪. ಶ್ರೀವಿದ್ಯಾವಾರಿನಿಧಿತೀರ್ಥ ಶ್ರೀಪಾದರು ಶ್ರೀ ಕಾಣಿಯೂರು ಮಠ.
೫. ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಶ್ರೀ ಕಾಣಿಯೂರು ಮಠ.
೬. ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಶ್ರೀ ಭಂಡಾರಕೇರಿ ಮಠ.
೭. ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶ್ರೀಪೇಜಾವರಮಠ.
೮. ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದರು ಶ್ರೀ ಉತ್ತರಾದಿಮಠ.
೯. ಶ್ರೀ ಶಂಕರಭಾರತೀ ಶ್ರೀಪಾದರು ಶ್ರೀ ಯಡತೊರೆ ಮಠ.

ಇಷ್ಟು ಮಾತ್ರವಲ್ಲದೆ, ಈ ಮಹಾವಿದ್ಯಾಲಯದಲ್ಲಿ ಶ್ರೀ ಶೀರೂರುಮಠದ ಶ್ರೀಲಕ್ಷ್ಮೀಂದ್ರತೀರ್ಥ ಶ್ರೀಪಾದರು, ಶ್ರೀ ಅದಮಾರು ಮಠದ ಶ್ರೀ ವಿಬುಧಮಾನ್ಯತೀರ್ಥ ಶ್ರೀಪಾದರು, ಶ್ರೀ ವಿಬುಧೇಶತೀರ್ಥ ಶ್ರೀಪಾದರು ಮತ್ತು ಶ್ರೀ ಪೇಜಾವರಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು, ಶ್ರೀಅದಮಾರು ಮಠದ ವಿಶ್ವಪ್ರಿಯತೀರ್ಥ ಶ್ರೀಪಾದರೇ ಮೊದಲಾದ ಪೀಠಾಧಿಪತಿಗಳು ಕೆಲವು ಕಾಲ ಗೌರವ ಪ್ರಾಧ್ಯಾಪಕರಾಗಿ ಬೋಧನಕಾರ್ಯವನ್ನು ಮಾಡಿ ಅನುಗ್ರಹಿಸಿರುವರು.

ಈ ಕಾಲೇಜಿನ ಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಮಹನೀಯರ ಹೆಸರುಗಳು ಈ ರೀತಿಯಾಗಿವೆ -

೧. ಶ್ರೀ ಮಡಿಕೇರಿ ದಾಸಪ್ಪಯ್ಯ 1921-22
೧. ಶ್ರೀ ಮಡಿಕೇರಿ ದಾಸಪ್ಪಯ್ಯ 1921-22
೨. ಶ್ರೀ ಉಡುಪಿ ವೆಂಕಟಕೃಷ್ಣ ರಾವ್ 1922-24
೩. ಶ್ರೀ ಪಿ. ಹನುಮಂತಾಚಾರ್ 1924-29
೪. ಶ್ರೀ ಎಂ. ರಾಮಚಂದ್ರ ರಾವ್ 1939-49
೫. ಶ್ರೀ ಪಡುಮನ್ನೂರು ನಾರಾಯಣಾಚಾರ್ಯ 1949-50
೬. ಶ್ರೀ ಡಾ. ಬಿ.ಎನ್.ಕೆ ಶರ್ಮಾ 1949-50
೭. ಶ್ರೀ ಕೌಲಗಿ ಶೇಷಾಚಾರ್ಯ 1951-62
೮. ಶ್ರೀ ನರಸಿಂಹ ಉಪಾಧ್ಯಾಯ 1962-68
೯. ಶ್ರೀ ಹರಿದಾಸ ಉಪಾಧ್ಯಾಯ 1968-84
೧೦. ವಿದ್ವಾನ್ ಪಿ. ಲಕ್ಷ್ಮೀನಾರಾಯಣ ಶರ್ಮಾ 1984-02
೧೧. ಡಾ. ಎಚ್.ಕೆ ಸುರೇಶಾಚಾರ್ಯ 2002-18
೧೨. ಪ್ರೊ. ಎನ್. ಲಕ್ಷ್ಮೀನಾರಾಯಣ ಭಟ್ಟ 2018-

ಕರಾವಳಿಯ ತೀರದಲ್ಲಿ ಕಾಸರಗೋಡು ಜಿಲ್ಲೆಯ ನೀರ್ಚಾಲಿನ ಮಹಾಜನ ಸಂಸ್ಕೃತ ಮಹಾವಿದ್ಯಾಲಯ, ಕಾರ್ಕಳದ ಶ್ರೀಭುವನೇಂದ್ರ ಸಂಸ್ಕೃತ ಮಹಾವಿದ್ಯಾಲಯ ಮತ್ತು ನಮ್ಮ ಈ ಮಹಾವಿದ್ಯಾಲಯ ಇವು ಆಗಿನ ಕಾಲದ ಸಂಸ್ಕೃತಾಧ್ಯಯನ ಕೇಂದ್ರಗಳಾಗಿ ಮನ್ನಣೆಯನ್ನು ಪಡೆದಿದ್ದವು. ಆದರೆ ಕಾಲದ ಪ್ರಭಾವದಿಂದಾಗಿ ಮಹಾಜನ ಸಂಸ್ಕೃತ ಮಹಾದ್ಯಾಲಯ ಮತ್ತು ಶ್ರೀಭುವನೇಂದ್ರ ಸಂಸ್ಕೃತ ವಿದ್ಯಾಲಯಗಳು ಆಧುನಿಕ ಶಿಕ್ಷಣ ಕೇಂದ್ರಗಳಾಗಿ ಮಾರ್ಪಟ್ಟವು. ನಮ್ಮ ಮಹಾವಿದ್ಯಾಲಯವು ಭಗವಂತನ ಅನುಗ್ರಹ, ಅಷ್ಟಮಠಾಧೀಶರಾದ ಯತಿವರ್ಯರ ಪೋಷಣೆ ಮತ್ತು ಸಮಸ್ತ ಸಂಸ್ಕೃತಾಭಿಮಾನಿಗಳ ಶುಭ ಹಾರೈಕೆಯ ಬಲದಿಂದ ಕ್ರಿಸ್ತಶಕ ೨೦೦೪ ರಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡು ಮುನ್ನಡೆಯುತ್ತಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಇಂದು ಇದಕ್ಕೆ ವಿಶ್ವವಿದ್ಯಾಲಯದ ಆದೇಶದಂತೆ ‘ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕ ಸಂಸ್ಕೃತಾಧ್ಯಯನ ಕೇಂದ್ರ’ ಎಂಬ ಹೆಸರೂ ಕೂಡಾ ಪ್ರಾಪ್ತವಾಗಿದೆ.

ಪ್ರಕೃತ ಈ ಮಹಾವಿದ್ಯಾಲಯದಲ್ಲಿ ಮುಖ್ಯವಾಗಿ ದ್ವೈತವೇದಾಂತ, ನವೀನನ್ಯಾಯ, ಜ್ಯೌತಿಷ ಮತ್ತು ಅಲಂಕಾರ ಎಂಬುದಾಗಿ ಒಟ್ಟು ನಾಲ್ಕು ಶಾಸ್ತ್ರಗಳಲ್ಲಿ BA ಗೆ ಸಮಾನವಾದ ಮೂರು ವರ್ಷಗಳ ಅವಧಿಯುಳ್ಳ ಶಾಸ್ತ್ರಿ ತರಗತಿ, MA ಗೆ ಸಮಾನವಾದ ಎರಡು ವರ್ಶಗಳ ಅವಧಿಯುಳ್ಳ ಆಚಾರ್ಯ ತರಗತಿ ಮತ್ತು PUC ಗೆ ಸಮಾನವಾದ ಎರಡು ವರ್ಷಗಳ ಅವಧಿಯುಳ್ಳ ಸಾಹಿತ್ಯ ತರಗತಿಯು ಕೂಡಾ ಬೋಧಿಸಲ್ಪಡುತ್ತಿದೆ.