ನಮ್ಮ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಅಧ್ಯಯನ ಕೇಂದ್ರಕ್ಕೆ ಸ್ವಾಗತ

ಇತ್ತೀಚಿಗಿನ ಕಾರ್ಯಕ್ರಮಗಳು


  1. S.M.S.P ಕಾಲೇಜಿನ ಹೊಸ ಪ್ರಾಂಶುಪಾಲರು(02-08-2021)
  2. ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕ ಸಂಸ್ಕೃತಾಧ್ಯಯನ ಕೇಂದ್ರದಲ್ಲಿ ಪ್ರಾಂಶುಪಾಲರಾಗಿದ್ದ ಡಾ. ಎನ್ಲಕ್ಶ್ಜ್ಮೀನಾರಾಯಣ ಭಟ್ ಅವರು ಸೇವೆಯಿಂದ ನಿವೃತ್ತಿಹೊಂದಿದ್ದು ನೂತನ ಪ್ರಾಂಶುಪಾಲರಾದ ಪ್ರೋ. ಹರಿದಾಸ ಭಟ್ ಇವರಿಗೆ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ವಹಿಸಿಕೊಂಡ ಹರಿದಾಸ ಭಟ್ಟರು ಜ್ಯೋತಿಷ ವಿದ್ವಾಂಸರಾಗಿದ್ದು, ತಮ್ಮ ಸೇವಾವಧಿಯನ್ನು ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗಾಗಿ ಮುಡುಪಾಗಿಡುವುದಾಗಿ ತಿಳಿಸಿದ್ದಾರೆ.


  3. ಶ್ರೀ ಬಿ.ಎಸ್.ಯಡಿಯೂರಪ್ಪರಿಂದ ಅನುದಾನ (02-08-2021)
  4. ಉಡುಪಿಯ ಎಸ್.ಎಮ್.ಎಸ್.ಪಿ. ಸಂಸ್ಕೃತ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಟ್ಟಡನವೀಕರಣದ ಬಗ್ಗೆ ಕರ್ನಾಟಕ ಸರಕಾರದ ಹಿಂದೂಧರ್ಮಾದಾಯದತ್ತಿ ಮತ್ತು ಮುಜರಾಯಿ ಇಲಾಖೆಯಿಂದ ಮಾನ್ಯ ಮುಖ್ಯಮಂತ್ರಿ ಶ್ರೀಬಿ.ಎಸ್.ಯಡಿಯೂರಪ್ಪನವರು ಮತ್ತು ಮಾನ್ಯ ಸಚಿವರಾದ ಶ್ರೀನಿವಾಸ ಪೂಜಾರಿಯವರ ವಿಶೇಷ ಸಹಕಾರದಿಂದ ಮಂಜೂರಾದ ರೂ ೨೫ ಲಕ್ಷ ಅನುದಾನವನ್ನು ಇಂದು ಸ್ವೀಕರಿಸಲಾಯಿತು. ಇಲಾಖೆಯ ಉಡುಪಿಯ ಸಹಾಯಕ ನಿರ್ದೇಶಕರಾದ ಶ್ರೀಗಣೇಶ್ರಾವ್ ಅವರು ಸಂಸ್ಥೆಯ ಆಡಳಿತಮಂಡಳಿ ಕಾರ್ಯದರ್ಶಿ ಶ್ರೀಯುತ ದೇವಾನಂದ ಉಪಾಧ್ಯಾಯ ಮತ್ತು ನಿಕಟಪೂರ್ವ ಪ್ರಾಚಾರ್ಯ ಡಾ.ಎನ್.ಎಲ್. ಭಟ್ಟರಿಗೆ ಚೆಕ್ಹಸ್ತಾಂತರಿಸಿದರು. ಸಂಸ್ಥೆಯ ಹಳೆ ವಿದ್ಯಾರ್ಥಿ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ಪೆರಂಪಳ್ಳಿ ಉಪಸ್ಥಿತರಿದ್ದರು. ಈ ಅನುದಾನ ಒದಗಿಸಿದ ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ಮತ್ತು ಶ್ರೀ ಕೋಟ ಶ್ರೀನಿವಾಸಪೂಜಾರಿಯವರಿಗೆ ಸಂಸ್ಥೆಯು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದೆ.


  5. ನವೀನ ನ್ಯಾಯಶಾಸ್ತ್ರ (01-08-2021)
  6. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ. ಕೆ.ಇ. ದೇವನಾಥನ್ ಅವರು ಪ್ರಥಮ ಭಾರಿಗೆ ಉಡುಪಿ ಸಂಸ್ಕೃತ ಕಾಲೇಜಿಗೆ ಭೇಟಿ ನೀಡಿ ಕಾವ್ಯಶಾಸ್ತ್ರ ವಿಚಾರಪರಿಷತ್ತಿನವತಿಯಿಂದ ನಡೆದದ ನ್ಯಾಯಶಾಸ್ತ್ರದ ಮಹತ್ವ ಎಂಬ ವಿಷಯದ ಕುರಿತು ಮಾತನಾಡುತ್ತಾ ಅಭಿಪ್ರಾಯಪಟ್ಟರು. ಅದಕ್ಕೂ ಮೊದಲು ಕಾಲೇಜಿನ ನವೀಕೃತ ಜ್ಯೋತಿಷ-ಆಗಮ ಪ್ರದರ್ಶಿನಿಯ ಉದ್ಘಾಟನೆಯನ್ನು ನಡೆಸಿದರು. ಈಸಂದರ್ಭಗಳಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಹರಿದಾಸಭಟ್ಟರು ಅಧ್ಯಕ್ಷತೆಯನ್ನುವಹಿಸಿದ್ದರು. ನಿವೃತ್ತ ಪ್ರಾಂಶುಪಾಲರಾದ ಡಾ. ಎನ್. ಲಕ್ಷ್ಮೀನಾರಾಯಣಭಟ್ಟರು, ಎಸ್.ಎಮ್.ಎಸ್.ಪಿ. ಸಭೆಯ ಕಾರ್ಯದರ್ಶಿಗಳಾದ ಶ್ರೀಯುತದೇವಾನಂದ ಉಪಾಧ್ಯಾಯರು, ಕೋಶಾಧಿಕಾರಿಗಳಾದ ಶ್ರೀಯುತ ಚಂದ್ರಶೇಖರ ಆಚಾರ್ಯರು, ಕಾಲೇಜಿನ ನಿವೃತ್ತ ಗ್ರಂಥಪಾಲಕರಾದ ಎ. ಹರಿಕೃಷ್ಣರಾವ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮುರಳೀಕೃಷ್ಣ ಮತ್ತಿತರರು ವೇದಘೋಷ ಗೈದರು. ಉಪಪ್ರಾಚಾರ್ಯರಾದ ಪ್ರೋ. ಸತ್ಯನಾರಾಯಣ ಆಚಾರ್ಯರು ಸ್ವಾಗತಿಸಿದರು. ಗೌರವಾಧ್ಯಾಪಕ ವಿ|ಅನಿಲ್ಜೋಶಿ ಧನ್ಯವಾದವನ್ನು ಸಮರ್ಪಿಸಿದರು. ವಿ| ಮಹೇಂದ್ರ ಸೋಮಯಾಜೀ ಕಾರ್ಯಕ್ರಮವನ್ನು ನಿರೂಪಿಸಿದರು.


  7. ಪ್ರಾಚಾರ್ಯ ಎನ್.ಲಕ್ಷ್ಮೀನಾರಾಯಣ ಭಟ್ಟರ(ಎನ್ ಎಲ್ ಬಿ ) ಸನ್ಮಾನ (24-07-2021)
  8. ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮತ್ತು ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು,ಉಡುಪಿ ಸಂಸ್ಕೃತ ಮಹಾಪಾಠಶಾಲೆಯಲ್ಲಿ ನಿವೃತ್ತಿ ಹೊಂದುತ್ತಿರುವ ಪ್ರಾಚಾರ್ಯರಾದ ಎನ್.ಲಕ್ಷ್ಮೀನಾರಾಯಣ ಭಟ್ಟರ(ಎನ್ ಎಲ್ ಬಿ ) ಯವರನ್ನು ಸನ್ಮಾನಿಸಿದ್ದರು. ಅಭಿನಂದನಾ ಭಾಷಣವನ್ನು ಕಟೀಲು ಕ್ಷೇತ್ರದ ಆನುವಂಶಿಕ ಮೊಕ್ತೇಸರರಾದ ಹರಿನಾರಾಯಣ ದಾಸ ಅಸ್ರಣ್ಣರು ಮತ್ತು ಪ್ರಸಿದ್ಧ ಆಗಮ ಪಂಡಿತರಾದ ಪಂಜ ಭಾಸ್ಕರ ಭಟ್ಟರು ಮಾಡಿದರು. ಸನ್ಮಾನವನ್ನು ಸ್ವೀಕರಿಸಿದ ಲಕ್ಶ್ಮೀನಾರಾಯಣ ಭಟ್ಟರು,ಗುರುಗಳ,ಸಂಸ್ಕ್ರುತಜ್ನರ ಸಮ್ಮುಖದಲ್ಲಿ ನಡೆದದ್ದು ಸಮ್ಮಾನವಲ್ಲ ಇದು ನನಗೆ ಮಾಡಿದ ಪರಮಾನುಗ್ರಹ ಎಂದರು. ಸನ್ಮಾನ ಪಾತ್ರವನ್ನು ಡಾ.ಷಣ್ಮುಖ ಹೆಬ್ಬಾರ್ ವಾಚಿಸಿದರು.ಶ್ರೀಮನ್ಮಧ್ವ ಸಿದ್ಧಾಂತ ಪ್ರಬೋಧಕ ಸಂಸ್ಕೃತ ಅಧ್ಯಯನ ಕೇಂದ್ರದ ಪ್ರಭಾರ ಪ್ರಾಂಶುಪಾಲರಾದ ಹರಿದಾಸ ಭಟ್ಟರು ಸ್ವಾಗತಿಸಿ,ಸಭೆಯ ಕೋಶಾಧಿಕಾರಿ ಚಂದ್ರ ಶೇಖರ ಆಚಾರ್ಯರು ಧನ್ಯವಾದ ಅರ್ಪಿಸಿದರು,ಡಾ.ಶಿವಪ್ರಸಾದ ತಂತ್ರಿಯವರು ಕಾರ್ಯಕ್ರಮ ನಿರ್ವಹಿಸಿದರು.


  9. ಕೋವಿಡ್ ವ್ಯಾಕ್ಸಿನೇಷನ್ (9-7-2021)
  10. ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಎಲ್ಲ ಸಂಸ್ಕೃತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂಧಿಗಳಿಗೆ ಕೋವಿಡ್ ಲಸಿಕೆಯನ್ನು ನೀಡುವ ವ್ಯವಸ್ಥೆಯನ್ನು ಮಾಡಬೇಕೆಂದು ಆದೇಶವನ್ನು ಜಾರಿಗೊಳಿಸಿತ್ತು . ಸದರಿ ಆದೇಶದಂತೆ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಕಾಲೇಜಿನಲ್ಲಿ ದಿನಾಂಕ ೦೯/೦೭/೨೦೨೧ ರಂದು ಉಡುಪಿ ನಗರದ ಪ್ರಾಥಮಿಕ ಆರೋಗ್ಯಕೇಂದ್ರದ ಸಹಕಾರದೊಂದಿಗೆ ಡಾ. ಹೇಮಂತ್ ಅವರ ನೇತೃತ್ವದಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ನೀಡಲಾಯಿತು . ಈ ಕಾರ್ಯಕ್ರಮವು ಸುಮಾರು ೧೦ ಗಂಟೆಗೆ ಪ್ರಾರಂಭವಾಗಿ ಅಪರಾಹ್ನ ೧ ಗಂಟೆವರೆಗೆ ನಡೆದಿದ್ದು, ಸಿಬ್ಬಂಧಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲಾಯಿತು. ಲಸಿಕೆಯನ್ನು ನೀಡಿದ ಅರೋಗ್ಯ ಶುಶ್ರುಷರಿಗೆ ಮತ್ತು ವೈದ್ಯಾಧಿಕಾರಿಗಳಿಗೆ ಸಂಸ್ಥೆಯ ವತಿಯಿಂದ ಗೌರವವನ್ನು ಅರ್ಪಿಸಲಾಯಿತು.


  11. ಗಾನ-ಆಖ್ಯಾನ ಕಾರ್ಯಕ್ರಮ (8-3-2021)
  12. ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೊಧಕ ಸಂಸ್ಕೃತಕಾಲೇಜಿನಲ್ಲಿ ಕಾವ್ಯಶಾಸ್ತ್ರ ವಿಚಾರಪರಿಷತ್ತಿನ ವತಿಯಿಂದ ವಿ|ಕುಂಭಾಸಿ ಶ್ರೀಪತಿ ಉಪಾಧ್ಯಾಯರ ನೇತೃತ್ವದಲ್ಲಿ ಗಾನ-ಆಖ್ಯಾನ ಕಾರ್ಯಕ್ರಮ ನಡೆಯಿತು. ಪ್ರವಚನವನ್ನು ವಿ|ಕುಂಭಾಸಿ ಶ್ರೀಪತಿ ಉಪಾಧ್ಯಾಯರು ಮತ್ತು ವಾಚನವನ್ನು ಸುಮಧರ ಕಂಠದ ವಿದ್ವಾನ್ ಗಣಪತಿ ಭಟ್ಟರು ನಡೆಸಿದರು, ತಬಲಾದಲ್ಲಿ ಉಡುಪಿ ಶ್ರೀ ಮಾಧವ ಉಪಾಧ್ಯಾಯರು ಹಾಗು ವಯಲಿನ್ ನಲ್ಲಿ ಕುಮಾರಿ ಧನಶ್ರೀ ಶಬರಾಯ ಸಹಕರಿಸಿದರು. ಎಸ್.ಎಮ್.ಎಸ್.ಪಿ. ಸಭೆಯ ಕಾರ್ಯದರ್ಶಿಗಳಾದ ಶ್ರೀಯುತ ದೇವಾನಾಂದ ಉಪಾಧ್ಯಾಯರು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಲಕ್ಶ್ಮೀನಾರಾಯಣ ಭಟ್, ಕಾವ್ಯಶಾಸ್ತ್ರವಿಚಾರ ಪರಿಷತ್ತಿನ ಕಾರ್ಯದರ್ಶಿಗಳಾದ ಪ್ರೋ. ಹರಿದಾಸ ಭಟ್, ಕಾಲೇಜಿನ ಉಪನ್ಯಾಸಕ ವೃಂದ ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು.


  13. ಮಂತ್ರಾಲಯ ಶ್ರೀಗಳ ಬೇಟಿ (25-2-2021)
  14. ಮಂತ್ರಾಲಯ ಶ್ರ್ತೀ ರಾಘವೇಂದ್ರ ಮಠದ ಶ್ರೀಶ್ರೀ ಸುಬುಧೇಂದ್ರ ತೀರ್ಥಶ್ರೀಪಾದಂಗಳವರು ಉಡುಪಿಯ ಎಸ್.ಎಮ್.ಎಸ್/ಪಿ. ಸಂಸ್ಕೃತ ಕಾಲೇಜಿಗೆ ಬೇಟಿ ನೀಡಿ ಕಾಲೇಜಿನ ನವೀಕರಣವನ್ನು ಕಂಡು ಅತ್ಯಂತ ಹರ್ಷ ವ್ಯಕ್ತಪಡಿಸಿದರು. ಕಾಲೇಜಿನ ಅಭಿವೃದ್ಧಿಯನ್ನು ಮುಕ್ತಕಂಠದಿಂದ ಹೊಗಳಿದರು. ಮುಂದಿನ ದಿನಗಳಲ್ಲಿಯೂ ತಾವು ಈ ಸಂಸ್ಕೃತಕಾಲೇಜಿನೊಂದಿಗಿದ್ದು ಶ್ರೀಮಠದವತಿಯಿಂದಲೂ ಕಾಲೇಜಿನ ಅಭಿವೃದ್ಧಿಗಾಗಿ ಸರ್ವರೀತಿಯಿಂದಲೂ ಸಹಕಾರವನ್ನು ನೀಡುವುದಾಗಿ ಆಶೀರ್ವದಿಸಿದ್ದಾರೆ. ಈಸಂದರ್ಭದಲ್ಲಿ ಎಸ್.ಎಮ್.ಎಸ್.ಪಿ. ಸಭೆಯ ಕಾರ್ಯದರ್ಶಿಗಳಾದ ಶ್ರೀಯುತ ದೇವಾನಂದ ಉಪಾಧ್ಯಾಯರು. ಕೋಶಾಧಿಕಾರಿಗಳಾದ ಶ್ರೀಯುತ ಚಂದ್ರಶೇಖರ ಆಚಾರ್ಯ, ಪ್ರಾಚಾರ್ಯರಾದ ಡಾ. ಲಕ್ಷ್ಮೀನಾರಾಯಾಣ ಭಟ್ಟ ಹಾಗು ಕಾಲೇಜಿನ ಅಧ್ಯಾಪಕವೃಂದ ಮತ್ತು ವಿದ್ಯಾರ್ಥಿಗಳನ್ನು ಶ್ರೀಗಳವರು ಫಲಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.


  15. ಅಂತರ್ಜಾಲ ಗೋಷ್ಠೀ - ದೇವಪ್ರಶ್ನಚಿಂತನಮ್ (6-2-2021)
  16. ಪೆಬ್ರವರಿ ದಿನಾಂಕ 6 ಶನಿವಾರದಂದು ‘ದೇವಪ್ರಶ್ನಚಿಂತನಮ್’ ಎಂಬ ವಿಷಯದ ಮೇಲೆ ಜ್ಯೌತಿಷ ವಿಭಾಗದಿಂದ ವೆಬಿನಾರ್ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಅದರಲ್ಲಿ ಪಲಿಮಾರು ಮಠಾಧೀಶರಾದ ಶ್ರೀಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಅಧ್ಯಕ್ಷರಾಗಿದ್ದರೆ ವಿವಿಯ ಮಾನ್ಯ ಕುಲಸಚಿವರಾದ ಪ್ರೊ. ಕೊಟ್ರೇಶ್ರವರು ಮುಖ್ಯಾತಿಥಿಗಳಾಗಿದ್ದರು. ಎಸ್.ಎಮ್.ಎಸ್.ಪಿ. ಸಭೆಯ ಸದಸ್ಯ ಮತ್ತು ಜ್ಯೌತಿಷತಜ್ಞರಾದ ವಿದ್ವಾನ್ ಗೋಪಾಲಕೃಷ್ನ ಜೋಯಿಸ್ ಅವರು ಪ್ರಕೃತ ವಿಷಯದಲ್ಲಿ ಉಪನ್ಯಾಸವನ್ನು ಮಾಡಿದರು.


  17. ಅಂತರ್ಜಾಲ ಗೋಷ್ಠೀ - ಮತತ್ರಯಪ್ರತಿಪಾದಿತಂ ಮೋಕ್ಷಸ್ವರೂಪಮ್ (23-12-2020)
  18. ತತ್ತ್ವ ಶಾಸ್ತ್ರಗಳಲ್ಲಿ ಯಾವುದೇ ವಿಚಾರಗಳನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳಿ ಎಂದು ಎಲ್ಲೂ ಹೇಳಿಲ್ಲ. ಅದನ್ನು ಯುಕ್ತಿಯುಕ್ತವಾಗಿ ಪರಿಶೀಲಿಸಿ ಒಪ್ಪಿಕೊಳ್ಳಬೇಕೆನ್ನುವುದೇ ನಮ್ಮ ಪ್ರಾಚೀನರ ಅಭಿಪ್ರಾಯವಾಗಿದೆ. ಆದ್ದರಿಂದ ದ್ವೈತಾದ್ವೈತಾದಿ ಸಿದ್ಧಾಂತದ ವಿಷಯದಲ್ಲಿಯೂ ಅದೇ ದೃಷ್ಟಿ ಇರುವುದು ಯೋಗ್ಯ ಎಂದು ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸಂದೇಶವಿತ್ತರು. ಅವರು ನಮ್ಮ ಕಾಲೇಜಿನಿಂದ ಆಯೋಜಿಸಲ್ಪಟ್ಟ ‘ಮತತ್ರಯನಿರೂಪಿತಂ ಮೋಕ್ಷಸ್ವರೂಪಮ್’ ಎಂಬ ವಿಷಯದ ಕುರಿತಾದ ಅಂತರ್ಜಾಲೀಯ ಸಂಗೋಷ್ಠಿಯ (webinar) ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

    ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ.ಇ. ದೇವನಾಥನ್ ಅವರು ಮೂರೂ ಮತಗಳ ಸಾರವನ್ನು ನಿರೂಪಿಸಿದರು.

    ಪ್ರಧಾನ ಉಪನ್ಯಾಸಕರಾಗಿ ಭಾಗವಹಿಸಿದ ಬೆಂಗಳೂರಿನ ಪೂರ್ಣಪ್ರಜ್ಞ ಸಂಶೊಧನ ಮಂದಿರದ ನಿರ್ದೇಶಕರಾದ ಡಾ. ಆನಂದತೀರ್ಥ ನಾಗಸಂಪಿಗೆಯವರು ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತ ಮತಗಳಿಗನುಗುಣವಾಗಿ ಸಾರವನ್ನು ಸವಿವರವಾಗಿ ನಿರೂಪಿಸಿದರು.

    ಎಸ್.ಎಮ್.ಎಸ್.ಪಿ. ಸಂಸ್ಕೃತ ಸಭೆಯ ಕಾರ್ಯದರ್ಶಿ ಶ್ರೀ ದೇವಾನಂದ ಉಪಾಧ್ಯಾಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರೊ. ಷಣ್ಮುಖ ಹೆಬ್ಬಾರರಿಂದ ನಿರ್ವಹಿಸಲ್ಪಟ್ಟ ಈ ಕಾರ್ಯಕ್ರಮವು ವಿದ್ಯಾರ್ಥಿ ಮುರಲೀಕೃಷ್ಣನ ವೇದಘೋಷ, ಅಧ್ಯಾಪಕ ಮಹೇಂದ್ರ ಸೋಮಯಾಜಿಯವರ ಸ್ವಾಗತದೊಂದಿಗೆ ಆರಂಭವಾಗಿ ಅಧ್ಯಾಪಕ ಶ್ರೀ ಅಜಿತ್ ಕುಮಾರ್ ರವರ ಧನ್ಯವಾದದೊಂದಿಗೆ ಮುಕ್ತಾಯಗೊಂಡಿತು.


  19. ಅಂತರ್ಜಾಲ ಗೋಷ್ಠೀ - ಗ್ರಹಯುತಿ (05-12-2020)
  20. ಆಕಾಶಕಾಯಗಳ ಪರಸ್ಪರ ಸಂಯೋಗ ಹಾಗೂ ಅವುಗಳ ಪರಿಣಾಮಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ನಿರೂಪಿಸಿದೆ. ಈ ಕುರಿತು ಅಧ್ಯಯನ ನಡೆಯಬೇಕಾಗಿದೆ ಎಂದು ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.

    ಜ್ಯೌತಿಷಶಾಸ್ತ್ರದ ಗಣಿತ ವಿಭಾಗದಲ್ಲಿ ದಶವಿಧ ಗಣಿತಗಳಿವೆ. ಸೂರ್ಯ ಚಂದ್ರ ಗ್ರಹಣಗಳು ಖೇಟ ಕಲಹ, ಸಮಾಗಮ, ಅಸ್ತೋದಯ, ಗ್ರಹಯುತಿ ಮುಂತಾದುವುಗಳು ಸಿದ್ಧಾಂತದಲ್ಲಿ ಗ್ರಹಯುತಿ ಅಂಶ ಹಾಗೂ ಫಲಿತದಲ್ಲಿ ಗ್ರಹಗಳ ಯೋಗ ಎಂದು ಕರೆಯಲಾಗುತ್ತದೆ. ಗಣಿತದ ಮೂಲಕ ಗ್ರಹಗಳ ಚಲನೆಯನ್ನು ನೋಡಿ ಫಲವನ್ನು ಹೇಳಬಹುದು.

    ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿಶ್ವವಿದ್ಯಾಲಯದ ಪ್ರೊ. ಎ. ಶ್ರೀಪಾದಭಟ್ಟರು ಮಾತನಾಡಿ, ಗುರು ಶನಿಗ್ರಹಗಳ ಯುತಿಯ ಬಗ್ಗೆ ಮಾಹಿತಿ ನೀಡಿದರು. ಈ ಬಾರಿ ಡಿಸೆಂಬರ್ ೨೧ ರಂದು ಏಕರಾಶಿಯಲ್ಲಿ ಸಂಭವಿಸುವ ಗುರುಶನಿಯುತಿಯು ೬೦ ವರ್ಷಗಳಿಗೊಮ್ಮೆ ಸಂಭವಿಸುವ ಅತ್ಯಂತ ಅಪರೂಪದ ಯುತಿ ಎಂದು ತಿಳಿಸಿದರು. ಕಾಲೇಜಿನಲ್ಲಿ ಮುಖ್ಯ ಅತಿಥಿಗಳಾಗಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಎನ್. ಲಕ್ಷ್ಮೀನಾರಾಯಣ ಭಟ್ಟ. ಎಸ್.ಎಮ್.ಎಸ್.ಪಿ. ಸಭೆಯ ಕಾರ್ಯದರ್ಶಿ ಶ್ರೀ ದೇವಾನಂದ ಉಪಾಧ್ಯಾಯ, ವಿದ್ವಾನ್ ಬೈಲೂರು ನಾರಾಯಣ ತಂತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಜ್ಯೌತಿಷ ಪ್ರಾಧ್ಯಾಪಕ ಪ್ರೊ. ಶ್ರೀ ಹರಿದಾಸ ಭಟ್ಟರು ಸ್ವಾಗತಿಸಿದರು. ಡಾ. ಶಿವಪ್ರಸಾದ ತಂತ್ರಿಗಳಿಂದ ನಿರ್ವಹಿಸಲ್ಪಟ್ತ ಈ ಕಾರ್ಯಕ್ರಮದಲ್ಲಿ ಶ್ರೀ ರಾಧಾಕೃಷ್ಣರವರು ಧನ್ಯವಾದವನ್ನು ಸಮಾರ್ಪಿಸಿದರು.


  21. ಶಾರದಾಪೂಜೆ (21-10-2020 to 24-10-2020)
  22. ಅಕ್ಟೋಬರ್ ದಿನಾಂಕ 21 ರಿಂದ ವಿಜಯದಶಮಿಯ ತನಕ ನಾಲ್ಕು ದಿನಗಳ ತನಕ ಕಾಲೇಜಿನಲ್ಲಿ ಪ್ರತಿವರ್ಷ ನಡೆಯುವಂತೆ ಶಾರದೆಯ ಪೂಜೆ ನಡೆಯಿತು. ವಿದ್ವಾನ್ ವಾಗೀಶಭಟ್ಟರು ನಡೆಸಿಕೊಟ್ಟ ಈ ಪೂಜಾ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.


  23. ಬಿಲ್ವಪತ್ರೆ ಗಿಡ ವಿತರಣೆ (06-08-2020 to 08-08-2020)
  24. ಶ್ರೀಕೃಷ್ಣಜನ್ಮಾಷ್ಟಮೀ ಪ್ರಯುಕ್ತ ಶ್ರೀ ಪೇಜಾವರ ಮಠ ಮತ್ತು ಅರಣ್ಯ ಇಲಾಖೆಯ ಆಶ್ರಯದಲ್ಲಿ ನಮ್ಮ ಕಾಲೇಜಿನ NSS ವಿಭಾಗದ ವತಿಯಿಂದ ಸುಮಾರು 2,500 ಬಿಲ್ವಪತ್ರೆ ಗಿಡಗಳ ವಿತರಣೆ ನಡೆಯಿತು. ನಗರ ಮಧ್ಯದಲ್ಲಿ ನೆಡಲು ಜಾಗವಿಲ್ಲದಿರುವ ಕಾರಣ ಯಾರೂ ಕೂಡಾ ಗಿಡವನ್ನು ತೆಗೆದುಕೊಂಡು ಹೋಗಲಾರರೆಂಬ ಭಾವನೆ ಇತ್ತು. ಆದರೂ ಕೂಡಾ ಈ ಕಾರ್ಯಕ್ರಮ ಅಭೂತಪೂರ್ವ ಮನ್ನಣೆಯನ್ನು ಪಡೆಯಿತು. ಮೊದಲು ತರಿಸಿದ 2,000 ಗಿಡಗಳು ಸಂಪೂರ್ಣವಾಗಿ ಒಂದುವರೆ ದಿನದಲ್ಲಿಯೇ ಖಾಲಿಯಾಗಿ ಪುನಃ ಜನರ ಅಪೇಕ್ಷೆಯಂತೆ 500 ಗಿಡಗಳನ್ನು ತರಿಸಲಾಯಿತು. ಅದೂ ಕೂಡಾ ಮೂರನೆಯ ದಿನ ಬೆಳಿಗ್ಗೆಯೇ ಖಾಲಿಯಾಗಿ ಪುನಃ ಜನರು ಗಿಡಗಳನ್ನು ಅಪೇಕ್ಷಿಸಿತ್ತಿದ್ದುದು ಸಾಧಾರಣವಾಗಿತ್ತು.


  25. ವನಮಹೋತ್ಸವ (17-07-2020 to 20-07-2020)
  26. ಇಂದು ಕಾಲೇಜಿನ ಆವರಣದಲ್ಲಿ ವನಮಹೋತ್ಸವ ಪ್ರಯುಕ್ತ ಅರಣ್ಯ ಇಲಾಖೆಯ ಉಡುಪಿ-ಕುಂದಾಪುರ ವಿಭಾಗ ಮತ್ತು ಉಡುಪಿ ನಾಗರಿಕ ಸೇವಾ ಸಮಿತಿ ಇವುಗಳ ಆಶ್ರಯದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಅದರಲ್ಲಿ ಸಭೆಯ ಕಾರ್ಯದರ್ಶಿ ಶ್ರೀ ದೇವಾನಂದ ಉಪಾಧ್ಯಾಯ ಮತ್ತು ಕೋಷಾಧಿಆರಿ ಶ್ರೀ ಚಂದ್ರಶೇಖರ ಆಚಾರ್ಯ ಇವರು ಭಾಗವಹಿಸಿದ್ದರು.

    ಸಭೆಯ ಸದಸ್ಯರು, ಅಧ್ಯಾಪಕರು, ಹಳೆ ವಿದ್ಯಾರ್ಥಿಗಳು ಮತ್ತ ವಿದ್ಯಾರ್ಥಿಗಳ ಭಾಗವಹಿಸುವಿಕೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಶ್ರೀ ಗುರುರಾಜ ಕಾವಾಡಿ, ಅರಣ್ಯ ರಕ್ಷಕ ಶ್ರೀ ದೇವರಾಜ ಪಾಣ ಮತ್ತು ಉಡುಪಿ ನಾಗರಿಕ ಸೇವಾ ಸಮಿತಿಯ ಕಾರ್ಯದರ್ಶಿ ಶ್ರೀ ನಿತ್ಯಾನಂದ ಒಳಕಾಡು ಮತ್ತು ಕೋಶಾಧಿಕಾರಿ ಶ್ರೀ ತಾರಾನಾಥ ಮೇಸ್ತ ಇವರು ಭಾಗವಹಿಸಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಮತ್ತು ನಾಗರಿಕ ಸೇವಾ ಸಮಿತಿಯ ಕಾರ್ಯದರ್ಶಿಗಳನ್ನು ಅಭಿನಂದಿಸಲಾಯಿತು.

    ಆವರಣದಲ್ಲಿ ರೆಂಜೆ ಗಿಡಗಳ ಜೊತೆಗೆ ಹೆಚ್ಚು ಎತ್ತರ ಬೆಳೆಯದ ಕಸಿ ಸಂಪಿಗೆ ಮೊದಲಾದ ಗಿಡಗಳನ್ನು ನೆಡಲಾಯಿತು.


  27. ಕಂಪ್ಯೂಟರ್ ಲ್ಯಾಬಿನ ಉದ್ಘಾಟನೆ (02-07-2020)
  28. ಇಂದು ಶ್ರೀಶ್ರೀ ವಿಶ್ವಪ್ರಸನ್ನತೀರ್ಥಶ್ರೀಪಾದಂಗಳವರಿಂದ ಕೆನರಾ (ಸಿಂಡಿಕೇಟ್) ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ನಿರ್ಮಿತವಾದ ನೂತನ ಕಂಪ್ಯೂಟರ್ ಲ್ಯಾಬಿನ ಉದ್ಘಾಟನೆಯು ಮಾಡಲ್ಪಟ್ಟಿತು. ಉದ್ಘಾಟನೆಯನ್ನು ಮಾಡಿ ಮಾತನಾಡುತ್ತಾ ಪರಮಪೂಜ್ಯ ಸ್ವಾಮೀಜಿಯವರು ಶ್ರೀಯುತ ಹಂದೆಯವರ ಸಂಸ್ಕೃತ ಪ್ರೀತಿಯನ್ನು ಶ್ಲಾಘಿಸಿ, ಅವರ ಬ್ಯಾಂಕಿನ ಕೊಡುಗೆ ನಮ್ಮ ಕಾಲೇಜಿಗೆ ಅನನ್ಯವಾದುದು ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

    ಇದರಲ್ಲಿ ಮಣಿಪಾಲ ವಿಭಾಗೀಯ ಕಛೇರಿಯಲ್ಲಿ DGM ಆಗಿರುವ ಮಾನ್ಯ ಶ್ರೀ ಭಾಸ್ಕರ ಹಂದೆಯವರು ಮುಖ್ಯಾತಿಥಿಗಳಾಗಿ ಆಗಮಿಸಿದ್ದರು. ಇನ್ನು ಮುಂದೆ ಸಂಸ್ಕೃತ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನವನ್ನು ಹೊಂದಿ ಈಗಿನ ಸಮಾಜದಲ್ಲಿ ಎಲ್ಲರೊಂದಿಗೆ ಸರಿ ಸಮಾನವಾಗಿ ಮುನ್ನೆಡೆಯುವಂತಾಗಲಿ ಎಂದು ಹಾರೈಸಿದರು. ಸ್ವಾಗತವನ್ನು ಮಾಡಿದ ಕಾಲೇಜಿನ ಪ್ರಾಚಾರ್ಯರು ಕಂಪ್ಯೂಟರ್ ಲ್ಯಾಬಿನ ಆವಶ್ಯಕತೆಯನ್ನು ಪ್ರತಿಪಾದಿಸಿ ನೆರೆದ ಎಲ್ಲರಿಗೂ ಸ್ವಾಗತವನ್ನು ಕೋರಿದರು. ವೇದಾಂತ ವಿಭಾಗದ ಪ್ರಾಧ್ಯಾಪಕ ಡಾ. ಷಣ್ಮುಖ ಹೆಬ್ಬಾರರು ಧನ್ಯವಾದವನ್ನು ಕೋರಿದರು.